Zephaniah 2

ಯೆಹೂದಕ್ಕೆ ಪ್ರಬೋಧನೆಯೂ ಖಂಡನೆಯೂ

ಯೆಹೋವನಿಗೆ ಶರಣಾಗಲು ಪ್ರೇರಣೆ

1ನಾಚಿಕೆಗೇಡಿ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ,

ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವುದಕ್ಕೆ ಮೊದಲೆ
ಯೆಹೋವನ ಸಿಟ್ಟಿನ ದಿನವೂ ಉರಿದು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ,
ನೀವೆಲ್ಲರೂ ಸೇರಿ ಬನ್ನಿರಿ, ಒಟ್ಟಾಗಿ ಕೂಡಿರಿ.
2 ಆ ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ.
3 ಯೆಹೋವನ ನಿಯಮವನ್ನು ಕೈಕೊಂಡು ನಡೆಯುವ ಲೋಕದ ದೀನರೇ,
ನೀವೆಲ್ಲರೂ ಯೆಹೋವನ ನೀತಿಯನ್ನು ಅನುಸರಿಸಿರಿ, ದ್ಧರ್ಮವನ್ನು ಅಭ್ಯಾಸಿಸಿರಿ, ನಮ್ರತೆಯನ್ನು ಹೊಂದಿಕೊಳ್ಳಿರಿ;
ಬಹುಶಃ ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಮರೆಯಾಗುವಿರಿ.

ಫಿಲಿಷ್ಟಿಯರ ದುರ್ಗತಿ

4

ಗಾಜ ಪಟ್ಟಣ ನಿರ್ಜನವಾಗುವುದು, ಅಷ್ಕೆಲೋನ್ ಹಾಳಾಗುವುದು,

ಅಷ್ಡೋದ್ ನಿವಾಸಿಗಳನ್ನು ನಡು ಮಧ್ಯಾಹ್ನದಲ್ಲಿ ಓಡಿಸಿಬಿಡುವರು, ಎಕ್ರೋನ್ ನಗರ ನಿರ್ಮೂಲವಾಗುವುದು.
5 ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ!
ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವನ ನುಡಿಯು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ವಾಸಿಸುವ ಜನರೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು.

6

ಸಮುದ್ರ ತೀರದ ಆ ಪ್ರಾಂತ್ಯವು ಹುಲ್ಲುಗಾವಲಾಗಿ, ಕುರುಬರ ಗುಡಿಸಿಲಾಗಿ, ಹಿಂಡುಗಳ ದೊಡ್ಡಿಗಳು ಇವೇ ಅಲ್ಲಿರುವವು.

7 ಆ ಕರಾವಳಿಯು ಉಳಿದ ಯೆಹೂದ್ಯರ ಪಾಲಾಗುವುದು;
ದನಕುರಿಗಳನ್ನು ಅಲ್ಲೇ ಮೇಯಿಸುವರು; ಸಂಜೆಗೆ ಅಷ್ಕೆಲೋನಿನ ಮನೆಗಳಲ್ಲಿ ಮಲಗಿಕೊಳ್ಳುವರು;
ಅವರ ದೇವರಾದ ಯೆಹೋವನು ಅವರನ್ನು ಪರಾಂಬರಿಸಿ ಅವರ ದುರವಸ್ಥೆಯನ್ನು ತಪ್ಪಿಸುವನು.

ಮೊವಾಬ್ಯಾರ ಮತ್ತು ಅಮ್ಮೋನಿಯರ ದುರ್ಗತಿ

8

ಮೋವಾಬ್ಯರೂ, ಅಮ್ಮೋನ್ಯರೂ ಅಹಂಕಾರದಿಂದ ನನ್ನ ಜನರ ಮೇರೆಯನ್ನು ಮೀರಿ,

ಅವರನ್ನು ನಿಂದಿಸಿ, ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ.
9 ಇಸ್ರಾಯೇಲರ ದೇವರಾದ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,
<<ನನ್ನ ಜೀವದಾಣೆ, ಸೊದೋಮಿನ ಗತಿಯೇ ಮೋವಾಬಿಗೆ ಆಗುವುದು. ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವುದು;
ಆ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ, ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು;
ನನ್ನ ಪ್ರಜೆಯಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು.
ಅವು ಉಳಿದ ನನ್ನ ಜನರಿಗೆ ಸ್ವಾಸ್ತ್ಯವಾಗುವುದು.>>

10

ಆ ಪ್ರಾಂತ್ಯಗಳವರು ಸೇನಾಧೀಶ್ವರನಾದ ಯೆಹೋವನ ಜನರನ್ನು ದೂಷಿಸಿ, ಅವರ ಮೇಲೆ ಉಬ್ಬಿಕೊಂಡು ಬಂದುದರಿಂದ ಅವರ ಅಹಂಕಾರದ ನಿಮಿತ್ತವೇ ಅವರಿಗೆ ಈ ಗತಿಯಾಗುವುದು!
11ಯೆಹೋವನು ಅವರಿಗೆ ಭಯಂಕರನಾಗುವನು; ಲೋಕದ ದೇವರುಗಳನ್ನೆಲ್ಲಾ ನಾಶಮಾಡುವನು; ಸಮಸ್ತ ಜನರು, ಪ್ರತಿಯೊಂದು ಪ್ರಾಂತ್ಯದ ನಿವಾಸಿಗಳು ಸಕಲ ಜನಾಂಗಗಳವರು ತಮ್ಮ ತಮ್ಮ ಸ್ಥಳಗಳಲ್ಲೇ ಆತನನ್ನು ಆರಾಧಿಸುವರು.

ಕೂಷಿನ ದುರ್ಗತಿ


12

ಕೂಷಿನವರೇ, ನೀವು ಸಹ ನನ್ನ ಖಡ್ಗದಿಂದ ಹತರಾಗುವಿರಿ.

ನಿನವೆಯ ದುರ್ಗತಿ

13 ಯೆಹೋವನು ಉತ್ತರಕ್ಕೆ ಕೈಚಾಚಿ ಅಶ್ಯೂರವನ್ನು ಧ್ವಂಸ ಮಾಡುವನು;
ನಿನವೆಯನ್ನು ಹಾಳುಮಾಡಿ ನೀರಿಲ್ಲದ ಮರುಭೂಮಿಯಂತೆ ಒಣಗಿಸಿಬಿಡುವನು.
14 ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು;
ಕೊಕ್ಕರೆಯೂ, ಮುಳ್ಳುಹಂದಿಯೂ ಹಟ್ಟಿಗಳಲ್ಲಿ ವಾಸಮಾಡಿಕೊಳ್ಳುವವು.
ಗೂಬೆಯು ಕಿಟಕಿಗಳಲ್ಲಿ ಮನೆಕಂಬಗಳ ಮೇಲೆ ಚಿಲಿಪಿಲಿ ಗಾನವು ತಂಗುವವು; ಕಾಗೆಗಳ ಕೂಗು ಹೊಸ್ತಿಲುಗಳಲ್ಲಿ ಕೇಳುವುದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವುದು.

15

ಈ ನಿನವೆಯು ಮೊದಲು ಉಲ್ಲಾಸದ ನಗರಿಯಾಗಿ ನೆಮ್ಮದಿಯಿಂದ ನೆಲೆಗೊಂಡಿದ್ದು

ತನ್ನ ಹೃದಯದೊಳಗೆ, <<ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ>> ಅಂದುಕೊಳ್ಳುತ್ತಿತ್ತು;
ಅಯ್ಯೋ, ಎಷ್ಟೋ ಹಾಳಾಗಿ ಹೋಗಿ ಮೃಗಗಳು ತಂಗುವ ಕೊಟ್ಟಿಗೆಯ ಬೀಡಾಗಿದೆ!
ಅದರ ಮುಂದೆ ಹಾದುಹೋಗುವವರೆಲ್ಲರು ಸಿಳ್ಳು ಹಾಕಿ ಅಪಹಾಸ್ಯ ಮಾಡುತ್ತಾರೆ.

Copyright information for KanULB